RASHI POOJA MAHOTSAVA

Click here to edit subtitle

 

ರಾಶಿ ಪೂಜಾ ಮಹತ್ವ


     ದೇವರನ್ನು ಒಲಿಸಿಕೊಳ್ಳಬೇಕಾದರೆ ಕೃತಯುಗದಲ್ಲಿ ಹತ್ತು ವರ್ಷ ಕಾಲ ಧ್ಯಾನಿಸಬೇಕು, ತ್ರೇತಾಯುಗದಲ್ಲಿ ಒಂದು ವರ್ಷ ಕಾಲ ಯಜ್ಞಯಾಗಾದಿಗಳನ್ನು ನಡೆಸಬೇಕು, ದ್ವಾಪರಯುಗದಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ದೇವಾರ್ಚನೆಯನ್ನು ನಡೆಸಬೇಕು. ಆದರೆ ಕಲಿಯುಗದಲ್ಲಿ ಒಂದು ಅಹೋರಾತ್ರಿ ದೇವಾರ್ಚನೆ ಮತ್ತು ನಾಮ ಸಂಕೀರ್ತನೆಯಿಂದ ಭಗವಂತನ ಪರಮಾನುಗ್ರಹಕ್ಕೆ ಪಾತ್ರರಾಗಬಹುದು. ಮಾತ್ರವಲ್ಲದೆ ಹಿಂದಿನ ಎಲ್ಲಾ ಕರ್ಮಗಳ ಪುಣ್ಯವು ಸಿದ್ಧಿಸುವುದು ಎಂಬುದಾಗಿ ಜ್ಞಾನಿಗಳಿಂದ ಹೇಳಲ್ಪಟ್ಟಿದೆ. ಕಲಿಯುಗದಲ್ಲಿ ಅತ್ಯಂತ ಪುಣ್ಯಪ್ರದವಾದ ಅಹೋರಾತ್ರಿ ಪರ‍್ಯಂತವಾದ ಏಕೈಕ ಆರಾಧನೆಯು "ರಾಶಿ ಪೂಜೆ"ಯಾಗಿರುತ್ತದೆ.

     "ಸೂರ್ಯೋ ಆತ್ಮಾಜಗತಃ". ಸೂರ್ಯನು ಇಡೀ ಜಗತ್ತಿನ ಆತ್ಮಕಾರಕನು. ಇಡೀ ಜಗತ್ತು ಸೂರ್ಯನ ಪ್ರಭಾವದಿಂದಲೇ ನಡೆಯುತ್ತದೆ. ಜಗತ್ತಿನ ಸಕಲ ಜೀವಿಗಳ ಸೃಷ್ಟಿ ಸ್ಥಿತಿ ಲಯಗಳಲ್ಲಿ ಸೂರ್ಯದೇವನೂ ಪ್ರಮುಖ ಪಾತ್ರ ವಹಿಸುತ್ತನೆ. ಅಂತಹ ಸೂರ್ಯದೇವನು ಹನ್ನೆರಡು ರಾಶಿಗಳಲ್ಲಿ ಸಂಚರಿಸುತ್ತಾನೆ. ಸೌರಮಂಡಲದಲ್ಲಿ ಹನ್ನೆರಡು ರಾಶಿಗಳಲ್ಲಿ ಪುರುಷೋತ್ತಮನಾದ ಶ್ರೀ ಹರಿಯು ಕೇಶವಾದಿ ದ್ವಾದಶ ರೂಪಗಳಿಂದಲೂ, ಮಂಗಲಕರನಾದ ಶಿವನು (ಶಂಕರ) ಮಹಾದೇವಾದಿ ದ್ವಾದಶ ರೂಪಗಳಿಂದಲೂ ಸನ್ನಿಹಿತರಾಗಿರುವರು. ಸೂರ್ಯದೇವನ ಗತಿಯನ್ನು ಅನುಸರಿಸಿ ಆತ ಪ್ರತಿಯೊಂದು ರಾಶಿಯನ್ನು ಪ್ರವೇಶಿಸುವ ಕಾಲದಲ್ಲಿ ವಿಷೇಶವಾದ ವಿಧಿವಿಧಾನಗಳಿಂದ ಶ್ರೀ ಕ್ಷೇತ್ರದ ಶಂಕರನಾರಾಯಣ ದೇವರನ್ನು ಆರಾಧಿಸುವ ಪರಿಕಲ್ಪನೆಯೇ "ದ್ವಾದಶ ರಾಶಿಪೂಜೆ".ಸೂರ್ಯದೇವನು ಸೂರ್ಯೋದಯದಿಂದ ಪ್ರಾರಂಭಿಸಿ ಮರುದಿನ ಸೂರ್ಯೋದಯದವರೆಗೆ ಸುಮಾರಾಗಿ ಎರಡು ಘಂಟೆ ಅವಧಿಗೆ ಒಂದು ರಾಶಿಯಂತೆ ಮೇಷಾದಿ ೧೨ ರಾಶಿಗಳಲ್ಲಿಯೂ ಪ್ರತಿನಿತ್ಯ ಸಂಚರಿಸುತ್ತಿರುವನು.

     ಸೂರ್ಯನು ಸಂಚರಿಸುವ ಮೇಷಾದಿ ೧೨ ರಾಶಿಗಳಲ್ಲಿ ಕೇಶವಾದಿ ದ್ವಾದಶ ಮೂರ್ತಿಗಳನ್ನು, ಮಹಾದೇವಾದಿ ದ್ವಾದಶ ಮೂರ್ತಿಗಳನ್ನೂ, ಆವಾಹಿಸಿಕೊಂಡು, ಮೂಲಬಿಂಬ ಹಾಗೂ ರಾಶಿಮಂಡಲದಲ್ಲಿ ವಿಧಿಪ್ರಕಾರವಾಗಿ ಅರ್ಚನೆ, ನೈವೇದ್ಯ, ಬಲಿ, ಸಂಕೀರ್ತನೆಗಳನ್ನು ಹಂತ ಹಂತವಾಗಿ ಅಹೋರಾತ್ರಿ ಪರ‍್ಯಂತವಾಗಿ ಮಾಡುವುದೇ ರಾಶಿ ಪೂಜೆಯ ವೈಶಿಷ್ಟ್ಯ. ಮಾತ್ರವಲ್ಲದೇ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಅವಿಚ್ಛಿನ್ನವಾದ ಸಂಕೀರ್ತನೆ, ೧೨ ಬಲಿಗಳು, ಬ್ರಾಹ್ಮಣ ಸುಹಾಸಿನೀ ಆರಾಧನೆ, ಅನ್ನಾರಾಧನೆ, ಬೂರಿಭೋಜನ, ಉತ್ಸವ, ಬಲಿ, ರಂಗಪೂಜೆ, ಭೂತಬಲಿ, ಉದ್ಯಾಪನಾ ಬಲಿಗಳು ಈ ರಾಶಿಪೂಜೆಯ ಅಂಗಗಳು. ಭಗವನ್ನಾಮ ಸಂಕೀರ್ತನೆಯು ಕಲಿಯುಗದಲ್ಲಿ ಸರ್ವದೋಷಗಳನ್ನೂ ಪರಿಹರಿಸುವ, ಮಂಗಲಕರವಾದ, ಶ್ರೇಯ ಸಾಧನವಾದ, ಭಗವಂತನಿಗೆ ಪ್ರಿಯವಾದ ಸುಲಭೋಪಾಯವೆಂದು ಋಷಿಮುನಿಗಳೂ, ದಾಸವರೇಣ್ಯರೂ ಸಾರಿದ್ದಾರೆ. ನಾದ ದೇವತೆ ಸರಸ್ವತಿ ಎಂದು ಪೂಜಿಸಿದ ತಾಳವನ್ನು ಹಿಡಿದು, ತ್ರಿಕರಣಪೂರ್ವಕವಾಗಿ ಭಗವಂತನ ಸಂಕೀರ್ತನೆಯನ್ನು ಹಾದುತ್ತಾ, ಕುಣಿಯುತ್ತಾ, ಹೃದಯದಲ್ಲಿ ದೇವರ ಹೊತ್ತು ಪ್ರದಕ್ಷಿಣೆಗೈಯುವುದೇ ಸಂಕೀರ್ತನೆ. ಇದು ನಿರಂತರವಾಗಿ ಸೂರ್ಯೋದಯದಿಂದ ಮರುಸೂರ್ಯೋದಯದವರೆಗೆ ಮುಖ್ಯವಾದ ಪ್ರಕ್ರಿಯೆಯಾಗಿ ವೈಶಿಷ್ಟ್ಯ ಪೂರ್ಣವಾಗಿ ಸಾರ್ಥಕವಾಗಿ ಜರುಗಿದರೆ ಇಡೀ ಊರಿಗೆ ಮತ್ತು ಪರಿಸರಕ್ಕೆ ಸಮಸ್ತ ಭಕ್ತ ಮಹಾಜನತೆಗೆ ಆರಾಧ್ಯ ಶ್ರೀ ಶಂಕರನಾರಾಯಣನ ಪರಮಾನುಗ್ರಹ ಪ್ರಾಪ್ತಿಯಾಗುತ್ತದೆ.

     ದೇವಸ್ಥಾನದಲ್ಲಿ ಗೋಮಯದಿಂದ ಶುದ್ಧೀಕೃತವಾದ ಸ್ಥಳದಲ್ಲಿ ತೋರಣ, ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಪಂಚವರ್ಣ ರಂಗೋಲಿಯಿಂದ ದ್ವಾದಶ ಪದ್ಮಗಳನ್ನು ಬರೆದು ಹನ್ನೆರಡು ಸ್ವಸ್ತಿಕೆ, ಕಲಶಗಳನ್ನಿಟ್ಟು, ಶ್ವೇತವಸ್ತ್ರ, ನಾನಾವಿಧ ಪತ್ರ ಪುಷ್ಪಗಳಿಂದ ಅಲಂಕರಿಸಿ ರಾಶಿಗಳ ದಿಕ್ಕಿಗನುಸಾರವಾಗಿ ರಾಶಿಗಳನ್ನು ಚಿಂತಿಸಿ ಕಾಲನಿಯಾಮಕನಾದ ಭಗವಂತನ ಕೇಶವಾದಿ ದ್ವಾದಶ ಮೂರ್ತಿಗಳನ್ನು ಮತ್ತು ಮಹಾದೇವಾದಿ ದ್ವಾದಶ ಮೂರ್ತಿಗಳನ್ನು ಅನುಸಂಧಾನ ಮಾಡಬೇಕು. ಆಯಾ ರಾಶಿಗಳ ಅಭ್ಯುದಯ ಕಾಲಕ್ಕೆ ವಿಷೇಶವಾದ ಜಪ, ಅರ್ಚನೆಗಳನ್ನು ನಡೆಸಿ, ಧೂಪ ದೀಪ ನೈವೇದ್ಯಗಳನ್ನು ಸಮರ್ಪಿಸಿಕೊಂಡು ಉತ್ಸವ ಬಲಿಯನ್ನು ಮಾಡುವುದೇ ರಾಶಿ ಪೂಜೆಯ ನಿಯಮ.

     ರಾತ್ರಿ ಮೂಲಬಿಂಬಕ್ಕೆ ವಿಷೇಶವಾದ ರೀತಿಯಯಲ್ಲಿ ರಂಗ ಪೂಜೆಯನ್ನು ನಡೆಸಬೇಕು.ಈ ಪ್ರಕಾರವಾಗಿ ನಡೆಸಿದ ರಾಶಿಪೂಜೆಯಿಂದ ದೇವಾಲಯದಲ್ಲಿ ಸಂಭವಿಸಬಹುದಾದ ತಂತ್ರ ಮಂತ್ರಗಳ ದೋಷಗಳು, ವಾಕ್‍ಕಲಹಗಳು, ಕೆಟ್ಟ ತರಂಗಗಳು, ಭೂತ ಪ್ರೇತಗಳ ಬಾದೆಗಳು ಪರಿಹಾರವಾಗಿ, ದೇವಾಲಯದಲ್ಲಿ ಪ್ರಸನ್ನತೆಯೂ, ಬಿಂಬದಲ್ಲಿ ದೇವತಾ ಸನ್ನಿಧಾನವೂ, ಗ್ರಾಮದಲ್ಲಿ ಸುಭಿಕ್ಷೆಗಳೂ ಪ್ರಾಪ್ತಿಯಾಗುವುದು.

     ೧೨ ರಾಶಿಗಳ ನವಗ್ರಹಗಳಿಗೆ ಆಶ್ರಯವಾಗಿರುವುದರಿಂದ ಒಂದೊಂದು ರಾಶಿಯ ಪೂಜೆಯನ್ನು ನೋಡುವುದರಿಂದಲೂ ನವಗ್ರಹಗಳ ಅನುಗ್ರಹವಾಗುತ್ತದೆ. ರಾಶಿಪೂಜೆಯ ದಿನ ದೇವಾಲಯ ಸಂದರ್ಶನ, ದೇವಬ್ರಾಹ್ಮಣವಂದನಾದಿ ಸತ್ಕರ್ಮ ಆಚರಣೆ, ಯಥಾಶಕ್ತಿ ಪ್ರದಕ್ಷಿಣೆ, ನಮಸ್ಕಾರ, ಸಾಮರ್ಥ್ಯಾನುಸಾರ ರಾಶಿಪೂಜಾ ಸೇವಾರ್ಥಿಯಾಗುವಿಕೆ, ರಾಶಿಪೂಜೆಯ ಪ್ರಾರಂಭದಿಂದ ಅಂತ್ಯದವರೆಗೂ ಪಾಲ್ಗೊಳ್ಳುವಿಕೆಗಳಿಂದಾಗಿ, ತನು-ಮನ-ಧನ ಸಹಾಯ ಸಹಿತವಾಗಿ ಕಲಿಯುಗದಲ್ಲಿ ಕಲ್ಪವೃಕ್ಷ ಕಾಮಧೇನು ಸ್ವರೂಪಿಯಾದ ಪರಮ ದುರ್ಲಾಭವಾದ ರಾಶಿಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರೆ ಅತ್ಯಂತ ಪ್ರಬಲವಾದ ಗ್ರಹಚಾರ ದೋಷಗಳು ಪರಿಹಾರವಾಗಿ ವಿದ್ಯೆ, ಸಂಪತ್ತು, ಆಯುಷ್ಯ, ಆರೋಗ್ಯ, ಸೌಭಾಗ್ಯಗಳು ವೃದ್ಧಿಸುವುದು ಅಲ್ಲದೆ ಮನದ ಸಕಲ ಇಷ್ಟಾರ್ಥಗಳೂ ಸಿದ್ಧಿಸಿ ರಾಶಿಪೂಜೆಯ ಕಲ್ಪೋಕ್ತ ಫಲ ಪ್ರಾಪ್ತಿಯಾಗುವುದೆಂದು ಶಾಸ್ತ್ರವಚನವಿದೆ. ರಾಶಿಪೂಜಾ ಸೇವೆಯಿಂದಾಗಿ ಶ್ರೀ ಕ್ಷೇತ್ರದ ಆರಾಧ್ಯ ಶ್ರೀ ಶಂಕರನಾರಾಯಣ ದೇವರ ಜೊತೆಗೆ ಪರಿವಾರ ದೇವರುಗಳ ಸಂತುಷ್ಟರಾಗಿ ದಶದಿಕ್ಕುಗಳಿಂದ ಒದಗಬಹುದಾದ ದುರಿತ ಸಂಕಷ್ಟಗಳು ಪರಿಹಾರವಾಗಿ ಸಮಸ್ತ ಸನ್ಮಂಗಳ ಪ್ರಾಪ್ತಿಯಾಗುತ್ತದೆ ಎಂಬುದು ಶಾಸ್ತ್ರ ವಾಕ್ಯ.

           ಈ ಮಹಾಮಂಗಲಪ್ರದಾಯಕ ಕೈಂಕರ‍್ಯವು ಸಾರ್ಥಕವಾಗಿ ಸಾಂಗವಾಗಲು ಆಸ್ತಿಕ ಸಜ್ಜನರಾದ ನಿಮ್ಮೆಲ್ಲರ ತನು ಮನ ಧನಗಳ ಸಹಕಾರ ಅತ್ಯಗತ್ಯ ಪುಣ್ಯಪ್ರದಾಯಕ ರಾಶಿಪೂಜಾ ಮಹೋತ್ಸವದಲ್ಲಿ ತಾವೆಲ್ಲರೂ ಭಾಗಿಯಾಗಬೇಕೆಂದು ವಿನಂತಿ.

 

VINOOTHANA DWAJA STHAMBHA

RECENT PHOTOS

RECENT VIDEOS

191 views - 0 comments
130 views - 0 comments
187 views - 0 comments
142 views - 0 comments